ಚಂದನವನದ ರಾಜಕುಮಾರ ನಟ ಪುನೀತ್ ರಾಜ್ ಕುಮಾರ್ ಇಂದು ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ಇಂದು ಬಾರದ ಲೋಕಕ್ಕೆ ತೆರಳಿದ್ದು, ಇಡೀ ಕರುನಾಡು ಕಣ್ಣೀರಲ್ಲಿ ಮುಳುಗಿದೆ.ಇವೆಲ್ಲಕ್ಕೂ ಮುನ್ನ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದ ನಟ ಪುನೀತ್ ಅವರು ಮ್ಯಾನೇಜರ್ ಗೆ ಕರೆ ಮಾಡಿ ಎಲ್ಲಿದ್ದೀಯಾ ಎಂದು ಕೇಳಿದ್ದರು. ಥಿಯೇಟರ್ ನಲ್ಲಿರುವೆ ಎಂದು ಮ್ಯಾನೇಜರ್ ಪ್ರತಿಕ್ರಿಯೆ ನೀಡಿದಾಗ, ಅದಕ್ಕೆ ಪುನೀತ್ ಬೇಗ ಮನೆಗೆ ಬಾ , ರೆಡಿಯಾಗಿ ಭಜರಂಗಿ ಸಿನಿಮಾಗೆ ಹೋಗೋಣ ಎಂದಿದ್ದರು.
ಸ್ವಲ್ಪ ಸಮಯದ ನಂತರ ಯಾಕೋ ಸ್ವಲ್ಪ ಸುಸ್ತು ಆಗಿದೆ. ಬೇಗ ಬಾ ಎಂದು ಹೇಳಿದ್ದರು. ಅಷ್ಟೇ ಕೊನೆ ಪುನೀತ್ ರ ಮೊಬೈಲ್ ನಿಂದ ಹೋದ ಕೊನೆಯ ಕರೆ ಇದಾಗಿತ್ತು. ಪುನೀತ್ ರಾಜ್‌ಕುಮಾರ್ ಅವರು ದಿಗ್ಗಜ ನಟರಾದ ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರ ಪುತ್ರ. ಪುನೀತ್ ಅವರು ಬಾಲ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 1985 ರಲ್ಲಿ ಬೆಟ್ಟದ ಹೂವು ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.
ಅವರು ಯುವರತ್ನ, ರಾಜಕುಮಾರ, ಅಂಜನಿ ಪುತ್ರ, ಪವರ್ ಮತ್ತು ಅಪ್ಪು ಸೇರಿದಂತೆ 29 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪುನೀತ್ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಅವರ ಅಗಲಿಕೆ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ದೊಡ್ಡ ಶೂನ್ಯವನ್ನುಂಟು ಮಾಡಿದೆ. ಇದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ.
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರು ನಿಧನ ಹೊಂದುವುದಕ್ಕೆ ಮೊದಲು ಆರೋಗ್ಯದಲ್ಲಿ ಏನೇನು ವ್ಯತ್ಯಾಸವಾಯಿತು ಎಂದು ವಿಕ್ರಂ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ರಂಗನಾಥ್ ನಾಯಕ್ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಎದ್ದ ಪುನೀತ್ ರಾಜ್ ಕುಮಾರ್ ಎಂದಿನಂತೆ ವರ್ಕೌಟ್ ಗೆ ಜಿಮ್ ಗೆ ಹೋಗಿದ್ದರು. ಅಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದು ಪಕ್ಕದ ಫ್ಯಾಮಿಲಿ ಡಾಕ್ಟರ್ ಆದ ಡಾ.ರಮಣರ ಬಳಿಗೆ ಹೋಗಿದ್ದಾರೆ. ಅಲ್ಲಿ ಇಸಿಜಿ ಮಾಡಿದ್ದರು. ಇಸಿಜಿಯಲ್ಲಿ ಹೃದಯಾಘಾತವಾಗಿದೆ ಎಂದು ತೋರಿಸಿತ್ತು.