New Income Tax Bill House Property: ಕೇಂದ್ರ ಸರ್ಕಾರವು 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಇದಕ್ಕೆ ಇತ್ತೀಚೆಗೆ ಅನುಮೋದನೆ ದೊರೆತಿದೆ. ಈ ಮಸೂದೆಯಿಂದ ಮನೆ ಆಸ್ತಿಯಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸುವ ಕಾನೂನುಗಳು ಸರಳವಾಗಿದ್ದು, ಗೊಂದಲಗಳು ದೂರವಾಗಿವೆ.
ಮನೆ ಆಸ್ತಿ ಆದಾಯಕ್ಕೆ ತೆರಿಗೆ
1961ರ ಆದಾಯ ತೆರಿಗೆ ಕಾಯ್ದೆಯ ಜಾಗದಲ್ಲಿ ಜಾರಿಗೆ ಬರುವ ಈ ಹೊಸ ಮಸೂದೆಯು ಕಾನೂನುಗಳನ್ನು ಸರಳಗೊಳಿಸಿದೆ. ಅನಗತ್ಯ ಮತ್ತು ಕ್ಲಿಷ್ಟಕರ ಪರಿಭಾಷೆಗಳನ್ನು ತೆಗೆದುಹಾಕಿ, ಜನರಿಗೆ ಸುಲಭವಾಗಿ ಅರ್ಥವಾಗುವಂತೆ ರೂಪಿಸಲಾಗಿದೆ. ಖಾಸಗಿ ವಾಸಸ್ಥಳಗಳಿಂದ ಬರುವ ಬಾಡಿಗೆ ಆದಾಯಕ್ಕೆ ತೆರಿಗೆ ವಿಧಿಸುವ ವಿಧಾನದಲ್ಲಿ ಎರಡು ಪ್ರಮುಖ ಕಾನೂನುಗಳಿಗೆ ಸ್ಪಷ್ಟತೆ ನೀಡಲಾಗಿದೆ.
ಶೇ. 30 ಸ್ಟ್ಯಾಂಡರ್ಡ್ ಡಿಡಕ್ಷನ್ ವಿವರ
ಮನೆ ಆಸ್ತಿಯಿಂದ ಬರುವ ವಾರ್ಷಿಕ ಆದಾಯದಿಂದ ಆಸ್ತಿ ತೆರಿಗೆ (ಪ್ರಾಪರ್ಟಿ ಟ್ಯಾಕ್ಸ್) ಕಡಿತಗೊಳಿಸಿದ ನಂತರ, ಉಳಿದ ಮೊತ್ತದ ಮೇಲೆ ಶೇ. 30ರಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಬಹುದು. ಈ ಡಿಡಕ್ಷನ್ ಮನೆಯ ನಿರ್ವಹಣೆ ವೆಚ್ಚಕ್ಕಾಗಿ ನೀಡಲಾಗುತ್ತದೆ. ಉದಾಹರಣೆಗೆ, ನಿಮ್ಮ ಮನೆಯಿಂದ ವರ್ಷಕ್ಕೆ 2 ಲಕ್ಷ ರೂಪಾಯಿ ಬಾಡಿಗೆ ಆದಾಯ ಬಂದರೆ ಮತ್ತು ಆಸ್ತಿ ತೆರಿಗೆ 5,000 ರೂಪಾಯಿ ಆಗಿದ್ದರೆ, ಒಟ್ಟು ಆದಾಯ 1,95,000 ರೂಪಾಯಿ ಆಗುತ್ತದೆ. ಇದರ ಮೇಲೆ ಶೇ. 30 ಡಿಡಕ್ಷನ್ ಅಂದರೆ 58,500 ರೂಪಾಯಿ ಕಡಿತಗೊಂಗುತ್ತದೆ. ಆಗ ತೆರಿಗೆಗೆ ಒಳಪಡುವ ಮೊತ್ತ 1,36,500 ರೂಪಾಯಿ ಆಗುತ್ತದೆ.
ಹೋಮ್ ಲೋನ್ ಬಡ್ಡಿಗೆ ತೆರಿಗೆ ರಿಯಾಯಿತಿ
ಹೊಸ ಮಸೂದೆಯ 22(2) ನಿಯಮದ ಪ್ರಕಾರ, ಮನೆ ನಿರ್ಮಾಣಕ್ಕಾಗಿ ತೆಗೆದುಕೊಂಡ ಸಾಲದ ಮೇಲಿನ ನಿರ್ಮಾಣಪೂರ್ವ ಬಡ್ಡಿಗೆ ತೆರಿಗೆ ರಿಯಾಯಿತಿ ಲಭ್ಯವಿದೆ. ಈ ರಿಯಾಯಿತಿಯು ಸ್ವಂತ ವಾಸಕ್ಕೆ ಬಳಸುವ ಮನೆಗೆ ಮತ್ತು ಬಾಡಿಗೆಗೆ ಕೊಟ್ಟ ಮನೆಗೆ ಎರಡಕ್ಕೂ ಅನ್ವಯಿಸುತ್ತದೆ. ಉದಾಹರಣೆಗೆ, ಮೇಲಿನ ಉದಾಹರಣೆಯಲ್ಲಿ 1,36,500 ರೂಪಾಯಿ ಆದಾಯದಿಂದ, ನೀವು ಸಾಲದ ಬಡ್ಡಿಯಾಗಿ 70,000 ರೂಪಾಯಿ ಕಟ್ಟಿದ್ದರೆ, ಅದನ್ನು ಕಡಿತಗೊಳಿಸಿದ ನಂತರ ತೆರಿಗೆಗೆ ಒಳಪಡುವ ಆದಾಯ 66,500 ರೂಪಾಯಿ ಆಗುತ್ತದೆ.
ಜನರಿಗೆ ಇದರಿಂದ ಏನು ಲಾಭ?
ಈ ಹೊಸ ಕಾನೂನುಗಳಿಂದ ತೆರಿಗೆದಾರರಿಗೆ ಸ್ಪಷ್ಟತೆಯ ಜೊತೆಗೆ ಆರ್ಥಿಕ ಲಾಭವೂ ದೊರೆಯುತ್ತದೆ. ಮನೆ ಆಸ್ತಿಯ ಆದಾಯದ ಮೇಲಿನ ತೆರಿಗೆ ಲೆಕ್ಕಾಚಾರವು ಸರಳವಾಗಿದ್ದು, ಗೊಂದಲಗಳಿಲ್ಲದೆ ತೆರಿಗೆ ಉಳಿತಾಯ ಮಾಡಬಹುದು. ಈ ಬದಲಾವಣೆಗಳು ಜನಸಾಮಾನ್ಯರಿಗೆ ತೆರಿಗೆ ವಿಧಾನವನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸುತ್ತವೆ.