Ganesh Chaturthi 2025 BBMP Guidelines: 2025 ರ ಗಣೇಶ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಹಾಗೂ ಸುರಕ್ಷಿತವಾಗಿ ಆಚರಿಸಲು ಕೆಲವು ಮಾರ್ಘ ಸೂಚಿಯನ್ನು ಬಿಡುಗಡೆ ಮಾಡಿದೆ. ಇದೀಗ ನಾವು BBMP ಹೊರಡಿಸಿರುವ ಮಾರ್ಘಸೂಚಿಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
POP ಗಣೇಶ ಮೂರ್ತಿಗಳಿಗೆ ಕಠಿಣ ಕ್ರಮ
ಬಿಬಿಎಂಪಿ ಪರಿಸರದ ಮೇಲಿನ ದುಷ್ಪರಿಣಾಮವನ್ನು ತಡೆಗಟ್ಟಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ರಾಸಾಯನಿಕ ಬಣ್ಣಗಳು, ಮತ್ತು ಥರ್ಮೋಕೋಲ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಷೇಧಿತ ವಸ್ತುಗಳಿಂದ ತಯಾರಾದ ಮೂರ್ತಿಗಳನ್ನು ವಶಪಡಿಸಿಕೊಂಡು, ನಿಯಮಗಳ ಪ್ರಕಾರ ವಿಲೇವಾರಿ ಮಾಡಲಾಗುವುದು. ಆಯಾ ಉಪವಿಭಾಗಗಳ ನೋಡಲ್ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ದಳ, ಮತ್ತು ಬೆಸ್ಕಾಂ ಇಲಾಖೆಗಳ ಸಹಯೋಗದೊಂದಿಗೆ ಈ ನಿಯಮಗಳ ಜಾರಿಗೆ ನಿಗಾ ಇಡಲಿದ್ದಾರೆ.
ಪರಿಸರ ಸ್ನೇಹಿ ಜೇಡಿಮಣ್ಣಿನ ಮೂರ್ತಿಗಳಿಗೆ ಒತ್ತು
ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಕೇವಲ ನೈಸರ್ಗಿಕ ಜೇಡಿಮಣ್ಣನ್ನು ಬಳಸುವಂತೆ ಬಿಬಿಎಂಪಿ ಸೂಚಿಸಿದೆ. ಜೇಡಿಮಣ್ಣಿನ ಮೂರ್ತಿಗಳು ಪರಿಸರಕ್ಕೆ ಹಾನಿಯಾಗದಂತೆ ವಿಘಟನೆಯಾಗುತ್ತವೆ ಮತ್ತು ಮರುಬಳಕೆಗೆ ಸಹ ಸೂಕ್ತವಾಗಿವೆ. ಇದರಿಂದ ಕೆರೆಗಳು ಮತ್ತು ನೀರಿನ ಮೂಲಗಳ ಮಾಲಿನ್ಯ ತಡೆಗಟ್ಟಬಹುದು. ಕಲಾವಿದರು ಮತ್ತು ಮೂರ್ತಿ ತಯಾರಕರು ಈ ನಿಯಮಕ್ಕೆ ಬದ್ಧರಾಗಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿಕೆಗೆ ಒತ್ತು ನೀಡಬೇಕೆಂದು ಬಿಬಿಎಂಪಿ ಕರೆ ನೀಡಿದೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಪ್ರಕ್ರಿಯೆ
ಸಾರ್ವಜನಿಕ ಗಣೇಶೋತ್ಸವ ಆಯೋಜಕರಿಗೆ ಸುಗಮ ಅನುಮತಿ ಪ್ರಕ್ರಿಯೆಗಾಗಿ ಬಿಬಿಎಂಪಿ ವಿಶೇಷ ವ್ಯವಸ್ಥೆ ಮಾಡಿದೆ. ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು, ಉಪವಿಭಾಗೀಯ ಮಟ್ಟದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ಈ ಕಚೇರಿಗಳಲ್ಲಿ 75 ಏಕ-ಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಇಲ್ಲಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ, ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ತ್ವರಿತ ಅನುಮೋದನೆ ನೀಡಲಿದ್ದಾರೆ.
ಈ ವ್ಯವಸ್ಥೆಯಿಂದ ಆಯೋಜಕರಿಗೆ ಅನುಮತಿ ಪಡೆಯುವುದು ಸುಲಭವಾಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಸ್ಥಾಪನೆಗೆ ಸಂಬಂಧಿಸಿದ ಎಲ್ಲಾ ರೀತಿಯ ತಾಂತ್ರಿಕತೆಗಳನ್ನು ಒಂದೇ ಕಡೆ ಪರಿಹರಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
ಗಣೇಶ ಮೂರ্তಿಗಳ ವಿಸರ್ಜನೆಗೆ ವಿಶೇಷ ವ್ಯವಸ್ಥೆ
ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಬಿಬಿಎಂಪಿ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸಣ್ಣ ಜೇಡಿಮಣ್ಣಿನ ಮೂರ್ತಿಗಳನ್ನು ಮನೆಯಲ್ಲಿಯೇ ಬಕೆಟ್‌ನಲ್ಲಿ ಮುಳುಗಿಸಿ, ಆ ನಂತರ ಜೇಡಿಮಣ್ಣನ್ನು ಗಾರ್ಡನಿಂಗ್‌ಗಾಗಿ ಮರುಬಳಕೆ ಮಾಡುವಂತೆ ಸೂಚಿಸಲಾಗಿದೆ.
ಸಾರ್ವಜನಿಕ ಗಣೇಶೋತ್ಸವಗಳಿಗೆ, ಪ್ರತಿ ವಾರ್ಡ್‌ನಲ್ಲಿ ವಿಶೇಷ ವಿಸರ್ಜನಾ ಸ್ಥಳಗಳನ್ನು ಗೊತ್ತುಪಡಿಸಲಾಗುವುದು. ಜೊತೆಗೆ, ಸಂಚಾರಿ ವಿಸರ್ಜನಾ ಘಟಕಗಳನ್ನು ಸಹ ಒದಗಿಸಲಾಗುವುದು. ಈ ಸ್ಥಳಗಳು ಮತ್ತು ಘಟಕಗಳ ಕುರಿತು ಮಾಹಿತಿಯನ್ನು ಶೀಘ್ರದಲ್ಲಿ ಸಾರ್ವಜನಿಕರಿಗೆ ತಿಳಿಸಲಾಗುವುದು. ಗಣೇಶೋತ್ಸವದ ಸಮಯದಲ್ಲಿ ಉತ್ಪತ್ತಿಯಾಗುವ ಆರ್ದ್ರ ತ್ಯಾಜ್ಯವನ್ನು ಬಿಬಿಎಂಪಿಯ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಸಂಸ್ಕರಿಸಲಾಗುವುದು ಎಂದು ಪಾಲಿಕೆ ಭರವಸೆ ನೀಡಿದೆ.
ಪರಿಸರ ಸಂರಕ್ಷಣೆಗೆ ಒತ್ತು
ಗಣೇಶ ಚತುರ್ಥಿಯ ಆಚರಣೆಯ ಸಂದರ್ಭದಲ್ಲಿ ಕೆರೆಗಳು ಮತ್ತು ನೀರಿನ ಮೂಲಗಳ ಮಾಲಿನ್ಯ ತಡೆಗಟ್ಟಲು ಈ ಮಾರ್ಗಸೂಚಿಗಳು ಸಹಕಾರಿಯಾಗಲಿವೆ. ಬಿಬಿಎಂಪಿಯ ಈ ಕ್ರಮವು ಬೆಂಗಳೂರಿನ ಜನರಿಗೆ ಪರಿಸರ ಸ್ನೇಹಿ ಹಬ್ಬದ ಆಚರಣೆಯ ಮಹತ್ವವನ್ನು ಮನವರಿಕೆ ಮಾಡಿಕೊಡಲಿದೆ. ಜನರು ಈ ನಿಯಮಗಳನ್ನು ಪಾಲಿಸಿ, ಜೇಡಿಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಬಿಬಿಎಂಪಿ ಕೋರಿದೆ.