New Pan Card QR Code Launch: ಇದೀಗ ಪಾನ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿ ಉಳಿದಿಲ್ಲ, ಇದು ತೆರಿಗೆ ಮತ್ತು ಆರ್ಥಿಕ ವಹಿವಾಟುಗಳಿಗೆ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದೀಗ ಈ ಪಾನ್ ಕಾರ್ಡ್ ನಲ್ಲಿ ದೊಡ್ಡ ಬದಲಾವಣೆಯಾಗಲಿದೆ, ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ಯಾನ್ 2.0 ಯೋಜನೆಗೆ ಚಾಲನೆ ನೀಡಲು ಮುಂದಾಗಿದೆ. ಈ ಯೋಜನೆಯಡಿ, QR ಕೋಡ್ ನೊಂದಿಗೆ ಹೊಸ ಪ್ಯಾನ್ ಕಾರ್ಡ್‌ಗಳನ್ನು ಪರಿಚಯಿಸಲಾಗುತ್ತಿದೆ, ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಪ್ಯಾನ್ 2.0 ಎಂದರೇನು?
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದಂತೆ, ಪ್ಯಾನ್ 2.0 ಎಂಬುದು ತೆರಿಗೆದಾರರಿಗೆ ಡಿಜಿಟಲ್ ಸೇವೆಗಳನ್ನು ಸುಲಭ ಮತ್ತು ಸುರಕ್ಷಿತಗೊಳಿಸುವ ಇ-ಗವರ್ನೆನ್ಸ್ ಉಪಕ್ರಮವಾಗಿದೆ. ಈ ಯೋಜನೆಯ ಮೂಲಕ, ಪ್ಯಾನ್ ಕಾರ್ಡ್ ಸೇವೆಗಳನ್ನು ಆಧುನಿಕಗೊಳಿಸಲಾಗುತ್ತಿದೆ. ಇದರ ಗುರಿಯೇನೆಂದರೆ, ತೆರಿಗೆದಾರರಿಗೆ ಉತ್ತಮ ಡಿಜಿಟಲ್ ಅನುಭವವನ್ನು ಒದಗಿಸುವುದು.
ಈ ಬದಲಾವಣೆ ಏಕೆ ಅಗತ್ಯ?
ಪ್ರಸ್ತುತ ಬಳಕೆಯಲ್ಲಿರುವ ಪ್ಯಾನ್ ಕಾರ್ಡ್ 1972ರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A ಅಡಿಯಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಈವರೆಗೆ 78 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ನೀಡಲಾಗಿದ್ದು, ಶೇಕಡಾ 98ರಷ್ಟು ಕುಟುಂಬಗಳನ್ನು ಒಳಗೊಂಡಿದೆ. 10-ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯ ಮೂಲಕ ಆದಾಯ ತೆರಿಗೆ ಇಲಾಖೆಯು ವ್ಯಕ್ತಿಯ ಆರ್ಥಿಕ ವಹಿವಾಟುಗಳನ್ನು ಗಮನಿಸುತ್ತದೆ.
ಪ್ಯಾನ್ 2.0 ಉಚಿತವೇ? ಸಂಖ್ಯೆ ಬದಲಾಗುತ್ತದೆಯೇ?
ತೆರಿಗೆದಾರರ ಮನಸ್ಸಿನಲ್ಲಿ ದೊಡ್ಡ ಪ್ರಶ್ನೆ: ಈ ಹೊಸ ಕಾರ್ಡ್ ಉಚಿತವೇ? ಸಂಖ್ಯೆ ಬದಲಾಗುತ್ತದೆಯೇ? ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಪಷ್ಟಪಡಿಸಿದಂತೆ, ಕ್ಯೂಆರ್ ಕೋಡ್‌ನೊಂದಿಗಿನ ಹೊಸ ಪ್ಯಾನ್ ಕಾರ್ಡ್ ತೆರಿಗೆದಾರರಿಗೆ ಉಚಿತವಾಗಿ ನೀಡಲಾಗುವುದು. ಜೊತೆಗೆ, ಪ್ಯಾನ್ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಯೋಜನೆಯು ಹಳೆಯ ವ್ಯವಸ್ಥೆಯನ್ನು ಆಧುನಿಕಗೊಳಿಸುವ ಗುರಿಯನ್ನು ಹೊಂದಿದ್ದು, ಕಾರ್ಡ್‌ನ ಸ್ವರೂಪ ಮಾತ್ರ ಬದಲಾಗಲಿದೆ.
ಸರ್ಕಾರಕ್ಕೆ ಎಷ್ಟು ವೆಚ್ಚ?
ಪ್ಯಾನ್ 2.0 ಯೋಜನೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸುಮಾರು 1,435 ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗಲಿದೆ. ಈ ವೆಚ್ಚವು ಯೋಜನೆಯ ಜಾರಿ, ಡಿಜಿಟಲ್ ಸೇವೆಗಳ ಒದಗಿಕೆ ಮತ್ತು ತಾಂತ್ರಿಕ ಆಧುನೀಕರಣಕ್ಕೆ ಸಂಬಂಧಿಸಿದೆ. ಈ ಕ್ರಮವು ತೆರಿಗೆ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಜನರ ಆರ್ಥಿಕ ವಹಿವಾಟುಗಳನ್ನು ಸುಲಭಗೊಳಿಸಲಿದೆ.