Banking Rules Change July 2025: ಜುಲೈ 1, 2025 ರಿಂದ ಖಾಸಗಿ ವಲಯದ ಕೆಲವು ಬ್ಯಾಂಕ್ಗಳು ತಮ್ಮ ಶುಲ್ಕಗಳನ್ನು ಬದಲಾಯಿಸಲಿವೆ. ಐಸಿಐಸಿಐ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ನಂತಹ ಪ್ರಮುಖ ಬ್ಯಾಂಕ್ಗಳು ಡೆಬಿಟ್ ಕಾರ್ಡ್, ಎಟಿಎಂ ವಹಿವಾಟು ಮತ್ತು ಐಎಂಪಿಎಸ್ಗೆ ಸಂಬಂಧಿಸಿದ ಶುಲ್ಕಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ.
ಐಸಿಐಸಿಐ ಬ್ಯಾಂಕ್ನ ಹೊಸ ಶುಲ್ಕಗಳು
ಐಸಿಐಸಿಐ ಬ್ಯಾಂಕ್ ತನ್ನ ಎಟಿಎಂ ವಹಿವಾಟು ಮತ್ತು ಡೆಬಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆ ಮಾಡಿದೆ. ಮೆಟ್ರೋ ನಗರಗಳಲ್ಲಿ ತಿಂಗಾಳಿಗೆ ಮೂರು ಉಚಿತ ಎಟಿಎಂ ವಹಿವಾಟುಗಳು ಲಭ್ಯವಿರುತ್ತವೆ, ಆದರೆ ಇತರೆ ಸಣ್ಣ ನಗರಗಳಲ್ಲಿ ಐದು ಉಚಿತ ವಹಿವಾಟುಗಳನ್ನು ನೀಡಲಾಗುವುದು. ಇದರ ನಂತರ, ಹಣ ತೆಗೆಯಲು ಈಗಿನ 21 ರೂ. ಬದಲಿಗೆ 23 ರೂ. ಶುಲ್ಕ ವಿಧಿಸಲಾಗುವುದು. ಬ್ಯಾಲೆನ್ಸ್ ಚೆಕ್ ಅಥವಾ ಇತರ ಆರ್ಥಿಕೇತರ ವಹಿವಾಟುಗಳಿಗೆ ಪ್ರತಿ ವಹಿವಾಟಿಗೆ 8.5 ರೂ. ಶುಲ್ಕ ಇರಲಿದೆ.
ಐಎಂಪಿಎಸ್ ಶುಲ್ಕಗಳು
ಐಎಂಪಿಎಸ್ ಮೂಲಕ ಹಣ ಕಳುಹಿಸುವವರಿಗೆ ಶುಲ್ಕಗಳು ವಹಿವಾಟಿನ ಮೊತ್ತವನ್ನು ಆಧರಿಸಿರುತ್ತವೆ. 1,000 ರೂ.ವರೆಗಿನ ವಹಿವಾಟಿಗೆ 2.5 ರೂ., 1,000 ರಿಂದ 1 ಲಕ್ಷ ರೂ.ವರೆಗೆ 5 ರೂ., ಮತ್ತು 1 ಲಕ್ಷದಿಂದ 5 ಲಕ್ಷ ರೂ.ವರೆಗೆ 15 ರೂ. ಶುಲ್ಕ ವಿಧಿಸಲಾಗುವುದು. ಡೆಬಿಟ್ ಕಾರ್ಡ್ನ ವಾರ್ಷಿಕ ಶುಲ್ಕವು 200 ರೂ.ನಿಂದ 300 ರೂ.ಗೆ ಏರಿಕೆಯಾಗಿದೆ, ಮತ್ತು ಕಳೆದುಹೋದ ಅಥವಾ ಹಾನಿಗೊಳಗಾದ ಕಾರ್ಡ್ಗೆ ಹೊಸ ಕಾರ್ಡ್ ಪಡೆಯಲು ಕೂಡ 300 ರೂ. ಶುಲ್ಕ ಇರಲಿದೆ.
ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ನಿಯಮಗಳು
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಕೆಲವು ಹೊಸ ಶುಲ್ಕಗಳನ್ನು ಜಾರಿಗೆ ತಂದಿದೆ. ಒಂದು ತಿಂಗಳಲ್ಲಿ 10,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ಗೇಮಿಂಗ್ ಆಪ್ಗಳಾದ ಎಂಪಿಎಲ್, ಡ್ರೀಮ್ 11 ಅಥವಾ ಪೇಟಿಎಂ, ಮೊಬಿಕ್ವಿಕ್ನಂತಹ ಥರ್ಡ್-ಪಾರ್ಟಿ ವಾಲೆಟ್ಗಳಿಗೆ ಖರ್ಚು ಮಾಡಿದರೆ, 1% ಶುಲ್ಕ ವಿಧಿಸಲಾಗುವುದು.
ಡಿಜಿಟಲ್ ವಹಿವಾಟುಗಳ ಮಹತ್ವ
ಈ ಶುಲ್ಕ ಏರಿಕೆಯಿಂದಾಗಿ ಗ್ರಾಹಕರು ಡಿಜಿಟಲ್ ವಹಿವಾಟುಗಳತ್ತ ಹೆಚ್ಚು ಒಲವು ತೋರಬಹುದು. ಆನ್ಲೈನ್ ಬ್ಯಾಂಕಿಂಗ್, ಯುಪಿಐ ಮತ್ತು ಮೊಬೈಲ್ ಬ್ಯಾಂಕಿಂಗ್ನಂತಹ ಸೇವೆಗಳು ಶುಲ್ಕವಿಲ್ಲದೆ ಹಣ ವರ್ಗಾವಣೆ ಮಾಡಲು ಸಹಾಯಕವಾಗಿವೆ. ಗ್ರಾಹಕರು ಉಚಿತ ವಹಿವಾಟು ಮಿತಿಯನ್ನು ಗಮನದಲ್ಲಿಟ್ಟುಕೊಂಡರೆ ತಮ್ಮ ಖರ್ಚನ್ನು ಕಡಿಮೆ ಮಾಡಬಹುದು.