Guarantee Expense: ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗೆ ಸರ್ಕಾರ ಇಲ್ಲಿಯತನಕ ಮಾಡಿದ ಖರ್ಚು ಎಷ್ಟು…? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ.
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಎಷ್ಟು ಖರ್ಚು ಮಾಡಿದೆ...?
Guarantee Scheme Expenditure: ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್(Congress) ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಯಲ್ಲಿ ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಯನ್ನು ಈಗಾಗಲೇ ಒಂದೊಂದಾಗಿ ಜಾರಿಗೆ ತಂದಿದೆ. ಈ ಎಲ್ಲಾ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಎಷ್ಟು ಖರ್ಚು ಮಾಡಿದೆ..? ಎನ್ನುವ ಬಗ್ಗೆ ನಾವೀಗ ಸಂಪೂರ್ಣ ವಿವರ ತಿಳಿದುಕೊಳ್ಳೋಣ.
ಶಕ್ತಿ ಯೋಜನೆಗೆ ಮಾಡಿದ ವೆಚ್ಚ ಎಷ್ಟು..?
ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಕಳೆದ 6 ತಿಂಗಳಿನಿಂದ ನಾಡಿನ ಮಹಿಳೆಯರು ಶಕ್ತಿ ಯೋಜನೆಯಡಿ ನಿತ್ಯ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ. ಇಲ್ಲಿಯವರೆಗೆ ಶಕ್ತಿ ಯೋಜನೆಗೆ ಒಟ್ಟು 2303 ಕೋಟಿ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.
ಗೃಹ ಲಕ್ಷ್ಮಿ ಯೋಜನೆಗೆ ಮಾಡಿದ ವೆಚ್ಚ ಎಷ್ಟು..?
ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಮಹಿಳೆಯರಿಗೆ ಬೆಲೆ ಏರಿಕೆಯಿಂದ ನೆಮ್ಮದಿ ನೀಡಲು BPL ಕುಟುಂಬಗಳ ಯಜಮಾನಿಗೆ ಮಾಸಿಕ 2,000 ರೂಪಾಯಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಈಗಾಗಲೇ ಗೃಹ ಲಕ್ಷ್ಮಿ ಯೋಜನೆಗೆ 99.52 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಇದಕ್ಕಾಗಿ ಸರಕಾರ 17,500 ಕೋಟಿ ಮೀಸಲಾಗಿ ಇಟ್ಟಿದೆ. ಇಲ್ಲಿಯವರೆಗೆ 11,200 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ.
ಗೃಹ ಜ್ಯೋತಿ ಯೋಜನೆಗೆ ಮಾಡಿದ ವೆಚ್ಚ ಎಷ್ಟು..?
ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟ ರಾಜ್ಯದ ಜನತೆಗೆ ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಈ ಯೋಜನೆಗೆ ಒಟ್ಟು 1.56 ಕೋಟಿ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ 3 ತಿಂಗಳಿನಿಂದ ಈ ಯೋಜನೆಗೆ ರಾಜ್ಯ ಸರ್ಕಾರ 2,152 ಕೋಟಿ ಅನುದಾನವನ್ನ ಬಿಡುಗಡೆ ಮಾಡಿದೆ.
ಅನ್ನಭಾಗ್ಯ ಯೋಜನೆಗೆ ಮಾಡಿದ ವೆಚ್ಚ ಎಷ್ಟು..?
ರಾಜ್ಯದಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಮಾಸಿಕ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಅಕ್ಕಿ ಸರಬರಾಜು ಕಡಿಮೆ ಇರುವ ಕಾರಣಕ್ಕೆ 5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಯನ್ನ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿವರೆಗೆ ಒಟ್ಟು 3.92 ಕೋಟಿ ಫಲಾನುಭವಿಗಳ ಖಾತೆಗೆ 2,444 ಕೋಟಿ ರೂಪಾಯಿಯನ್ನ ಸರ್ಕಾರ ಜಮಾ ಮಾಡಿದೆ.