Indian Railway New Luggage Rules 2025: ಇತ್ತೀಚಿಗೆ ಭಾರತೀಯ ರೈಲ್ವೆ ಇಲಾಖೆ ನಿಯಮದಲ್ಲಿ ಹಲವಾರು ಬದಲಾವಣೆಯನ್ನು ಜಾರಿಗೆ ತಂದಿದೆ. ಇದೀಗ ಭಾರತೀಯ ರೈಲ್ವೇ ತನ್ನ ಪ್ರಯಾಣಿಕರಿಗೆ ಹೊಸ ಲಗೇಜ್ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ಈ ಕ್ರಮವು ರೈಲುಗಳಲ್ಲಿ ಜಾಗದ ಕೊರತೆ, ಕಿರಿಕಿರಿ ಮತ್ತು ಅನಾನುಕೂಲತೆಗಳನ್ನು ತಪ್ಪಿಸಲು ಜೊತೆಗೆ ರೈಲ್ವೇ ಇಲಾಖೆಗೆ ಆದಾಯವನ್ನು ಹೆಚ್ಚಿಸುವ ಉದ್ದೇಶವಾಗಿದೆ. ಈ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ರೈಲಿನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು?
ಭಾರತೀಯ ರೈಲ್ವೇ ತನ್ನ ಪ್ರಸ್ತಾವಿತ ನಿಯಮಗಳ ಪ್ರಕಾರ, ಪ್ರಯಾಣಿಕರು ತಮ್ಮ ರೈಲು ದರ್ಜೆಗೆ ತಕ್ಕಂತೆ ಲಗೇಜ್ ತೂಕದ ಮಿತಿಯನ್ನು ಅನುಸರಿಸಬೇಕು. ಈ ನಿಯಮಗಳು ಎಲ್ಲಾ ದರ್ಜೆಯ ರೈಲುಗಳಿಗೆ ಅನ್ವಯವಾಗಲಿವೆ:
- ಎಸಿ ಫಸ್ಟ್ ಕ್ಲಾಸ್: 70 ಕಿಲೋಗ್ರಾಂ
- ಎಸಿ ಟೂ ಟಯರ್: 50 ಕಿಲೋಗ್ರಾಂ
- ಎಸಿ ಥ್ರೀ ಟಯರ್: 40 ಕಿಲೋಗ್ರಾಂ
- ಸ್ಲೀಪರ್ ಕ್ಲಾಸ್: 40 ಕಿಲೋಗ್ರಾಂ
- ಜನರಲ್ ಕ್ಲಾಸ್: 35 ಕಿಲೋಗ್ರಾಂ
ಈ ಮಿತಿಗಳನ್ನು ಮೀರಿದ ಲಗೇಜ್‌ಗೆ ಹೆಚ್ಚುವರಿ ಶುಲ್ಕ ಅಥವಾ ದಂಡ ವಿಧಿಸಲಾಗುವುದು. ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ತೂಕ ಮಾಪನ ಯಂತ್ರಗಳನ್ನು ಬಳಸಿ ಪ್ರಯಾಣಿಕರು ತಮ್ಮ ಲಗೇಜ್ ತೂಕವನ್ನು ಪರಿಶೀಲಿಸಬೇಕು.
ಗಾತ್ರದ ಮಿತಿಯೂ ಮುಖ್ಯ
ತೂಕದ ಜೊತೆಗೆ ಲಗೇಜ್‌ನ ಗಾತ್ರವೂ ಮುಖ್ಯವಾಗಿದೆ. ಒಂದು ವೇಳೆ ಲಗೇಜ್ ತೂಕದ ಮಿತಿಯೊಳಗಿದ್ದರೂ, ಗಾತ್ರದಲ್ಲಿ ದೊಡ್ಡದಾಗಿದ್ದರೆ ದಂಡ ತೆರಬೇಕಾಗಬಹುದು. ವಿಮಾನ ನಿಲ್ದಾಣಗಳಂತೆ ರೈಲ್ವೇ ಕೂಡ ಲಗೇಜ್‌ನ ಸುತ್ತಳತೆ (ಉದ್ದ, ಅಗಲ, ಎತ್ತರ) ಮೇಲೆ ನಿಯಮಗಳನ್ನು ಜಾರಿಗೆ ತರಬಹುದು. ಉದಾಹರಣೆಗೆ, ವಿಮಾನ ಯಾನದಲ್ಲಿ ಲಗೇಜ್‌ನ ಸುತ್ತಳತೆ 158 ಸೆಂಟಿಮೀಟರ್‌ಗಿಂತ ಹೆಚ್ಚಿರಬಾರದು. ರೈಲ್ವೇ ಕೂಡ ಇಂತಹ ಕಟ್ಟುನಿಟ್ಟಿನ ನಿಯಮವನ್ನು ತರಬಹುದೆಂದು ಊಹಿಸಲಾಗಿದೆ, ಆದರೆ ಗಾತ್ರದ ನಿಖರವಾದ ಮಿತಿಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.
ಪ್ರಯಾಣಿಕರು ಒಂದು ಕೈಚೀಲ, ಲ್ಯಾಪ್‌ಟಾಪ್ ಚೀಲ ಅಥವಾ ಪರ್ಸ್‌ನಂತಹ ವೈಯಕ್ತಿಕ ವಸ್ತುಗಳನ್ನು ಶುಲ್ಕವಿಲ್ಲದೆ ಕೊಂಡೊಯ್ಯಬಹುದು. ಆದರೆ, ದೊಡ್ಡ ಗಾತ್ರದ ಚೀಲಗಳಿಗೆ ಶುಲ್ಕ ವಿಧಿಸುವ ಸಾಧ್ಯತೆ ಇದೆ.
ರೈಲ್ವೆ ನಿಲ್ದಾಣಗಳಲ್ಲಿ ಆಧುನಿಕತೆಯ ಕ್ರಮ
ಲಗೇಜ್ ನಿಯಮಗಳ ಜೊತೆಗೆ, ರೈಲ್ವೇ ಇಲಾಖೆಯು ರೈಲು ನಿಲ್ದಾಣಗಳನ್ನು ಆಧುನಿಕಗೊಳಿಸಲು ಯೋಜನೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಗಳಲ್ಲಿ ಪ್ರೀಮಿಯಂ ಸಿಂಗಲ್ ಬ್ರ್ಯಾಂಡ್ ಔಟ್‌ಲೆಟ್‌ಗಳು ತೆರೆಯಲಿವೆ. ಬಟ್ಟೆ, ಶೂಗಳು, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಿಗೆ ಪ್ರತ್ಯೇಕ ಬ್ರ್ಯಾಂಡ್ ಅಂಗಡಿಗಳು ಆರಂಭವಾಗಲಿವೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಆಯ್ಕೆಗಳು ಲಭ್ಯವಾಗುವುದಲ್ಲದೆ, ರೈಲ್ವೇಗೆ ಹೆಚ್ಚುವರಿ ಆದಾಯವೂ ದೊರೆಯಲಿದೆ.
ಈ ಕ್ರಮಗಳು ರೈಲು ನಿಲ್ದಾಣಗಳನ್ನು ಆಧುನಿಕ ಮಾಲ್‌ಗಳಂತೆ ಪರಿವರ್ತಿಸಲು ಸಹಾಯ ಮಾಡಲಿವೆ. ಇದರಿಂದ ಪ್ರಯಾಣಿಕರಿಗೆ ಉತ್ತಮ ಅನುಭವ ಮತ್ತು ರೈಲ್ವೇಗೆ ಹೆಚ್ಚಿನ ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ.
ಈಗಿನ ನಿಯಮಗಳೇನು?
ಪ್ರಸ್ತುತ ಇರುವ ನಿಯಮಗಳ ಪ್ರಕಾರವೂ, ನಿಗದಿತ ತೂಕಕ್ಕಿಂತ ಹೆಚ್ಚಿನ ಲಗೇಜ್‌ಗೆ ಶುಲ್ಕ ವಿಧಿಸಲಾಗುತ್ತದೆ. ಆದರೆ, ಹೊಸ ನಿಯಮಗಳು ಇನ್ನಷ್ಟು ಕಠಿಣವಾಗಿದ್ದು, ಹೆಚ್ಚಿನ ಶುಲ್ಕವನ್ನು ವಿಧಿಸುವ ಸಾಧ್ಯತೆ ಇದೆ. ಈ ಬದಲಾವಣೆಗಳು ರೈಲು ಪ್ರಯಾಣವನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲು ಸಹಾಯ ಮಾಡಬಹುದು, ಆದರೆ ಪ್ರಯಾಣಿಕರು ತಮ್ಮ ಲಗೇಜ್ ತೂಕ ಮತ್ತು ಗಾತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕಾಗುತ್ತದೆ.