Karnataka Property Ownership Documents: ಈಗಿನ ಕಾಲದ ಜನರು ಆಸ್ತಿಯ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಭೂಮಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರ ಕಾರಣ ಜನರು ಹೆಚ್ಚು ಹೆಚ್ಚು ಭೂಮಿ ಖರೀದಿಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಕರ್ನಾಟಕ ಕಾನೂನಿನ ಪ್ರಕಾರ, ಭೂಮಿ ಅಥವಾ ಆಸ್ತಿ ನೋಂದಣಿಗೆ ಕೆಲವು ಕಡ್ಡಾಯ ನಿಯಮ ಜಾರಿಗೆ ತರಲಾಗಿದೆ. ಅದೇ ರೀತಿಯಲ್ಲಿ ಭೂಮಿ ಅಥವಾ ಆಸ್ತಿ ನೋಂದಣಿಗೆ ಕೆಲವು ದಾಖಲೆ ಕಡ್ಡಾಯವಾಗಿದೆ. ಕೇವಲ ಆಸ್ತಿ ನೋಂದಣಿ ಆದಮಾತ್ರಕ್ಕೆ ಮಾಲೀಕತ್ವ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಈಗಾಗಲೇ ತೀರ್ಪು ಕೂಡ ನೀಡಿದೆ. ಆಸ್ತಿ ನೋಂದಣಿ ಜೊತೆಗೆ ಕೆಲವು ಅಗತ್ಯ ದಾಖಲೆ ಇದ್ದರೆ ಮಾತ್ರ ಆಸ್ತಿ ಮಾಲೀಕತ್ವ ಪಡೆದುಕೊಳ್ಳಬಹುದು. ಹಾಗಾದರೆ ಆಸ್ತಿ ಮಾಲೀಕತ್ವ ಪಡೆದುಕೊಳ್ಳಲು ಯಾವ ಯಾವ ದಾಖಲೆ ಕಡ್ಡಾಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಸ್ತಿ ನೋಂದಣಿ ಏಕೆ ಮಾಡಿಕೊಳ್ಳಬೇಕು?
ಕರ್ನಾಟಕದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ನೋಂದಣಿ ಕಡ್ಡಾಯವಾಗಿದೆ. ಇದು ಭಾರತೀಯ ನೋಂದಣಿ ಕಾಯ್ದೆ 1908ರಡಿ ಬರುತ್ತದೆ. ನೋಂದಣಿ ಮಾಡದಿದ್ದರೆ ಮಾಲೀಕತ್ವ ಕಾನೂನುಬದ್ಧವಾಗಿ ಪರಿಗಣಿಸಲ್ಪಡುವುದಿಲ್ಲ. ಆಸ್ತಿ ನೋಂದಣಿ ಕಚೇರಿಯಲ್ಲಿ ಆಸ್ತಿ ಮಾರಾಟ ಮಾಡುವವರು ಮತ್ತು ಆಸ್ತಿ ಖರೀದಿ ಮಾಡುವವರು ಕೆಲವು ಅಗತ್ಯ ದಾಖಲೆ ಕೊಟ್ಟು ಆಸ್ತಿ ನೋಂದಣಿ ಮಾಡಬೇಕಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಕೆಲವು ಅಗತ್ಯ ದಾಖಲೆ ಕೊಟ್ಟರೆ ಮಾತ್ರ ಖರೀದಿ ಮಾಡುವವರು ಆಸ್ತಿಯ ಮಾಲೀಕತ್ವ ಪಡೆದುಕೊಳ್ಳಬಹುದು.
ಆಸ್ತಿ ಮಾಲೀಕತ್ವಕ್ಕೆ ಬೇಕಾದ ಅಗತ್ಯ ದಾಖಲೆಗಳು
* ರಿಜಿಸ್ಟರ್ ಸೇಲ್ ಡೀಡ್
ರಿಜಿಸ್ಟರ್ ಸೇಲ್ ಡೀಡ್ ಆಸ್ತಿ ವರ್ಗಾವಣೆಯ ಸಮಯದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ವರ್ಗಾವಣೆ ಮಾಡುವಾಗ ರಿಜಿಸ್ಟರ್ ಸೇಲ್ ಡೀಡ್ ಕಡ್ಡಾಯವಾಗಿದೆ.
* ಎನ್‌ಕಂಬ್ರನ್ಸ್ ಸರ್ಟಿಫಿಕೇಟ್ (EC)
ಖರೀದಿ ಮಾಡುವ ಆಸ್ತಿಯ ಮೇಲೆ ಯಾವುದೇ ವಿವಾದ ಅಥವಾ ಸಾಲ ಇಲ್ಲ ಅನ್ನುವುದಕ್ಕೆ ಇದೊಂದು ಪ್ರಮುಖವಾದ ದಾಖಲೆಯಾಗಿದೆ. ಕನಿಷ್ಠ 15 -30 ವರ್ಷದ EC ಪರಿಶೀಲನೆ ಕಡ್ಡಾಯ
* ಇ-ಖಾತಾ ಸರ್ಟಿಫಿಕೇಟ್
ನಗರ ಪ್ರದೇಶದ ಆಸ್ತಿ ವರ್ಗಾವಣೆಗೆ ಇ-ಖಾತಾ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ಆಸ್ತಿ BBMP ಅಥವಾ ಮ್ಯೂನಿಸಿಪಾಲಿಟಿಯಿಂದ ನಿಮ್ಮ ಹೆಸರಿನಲ್ಲಿ ಆಸ್ತಿ ಎಂದು ಸಾಬೀತು ಮಾಡಲು ಇ-ಖಾತಾ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
* RTC (ಪಹಣಿ)
Bhoomi ಪೋರ್ಟಲ್ ನಲ್ಲಿ ಆಸ್ತಿಯ RTC ಪಡೆದುಕೊಳ್ಳಬೇಕು. ಆಸ್ತಿಗೆ ಸಂಬಂಧಿಸಿದಂತೆ ಕೆಲವು ಅಗತ್ಯ ಮಾಹಿತಿಯನ್ನು RTC ಮೂಲಕ ತಿಳಿದುಕೊಳ್ಳಬಹುದು.
* 2025 ರಿಂದ ಡಿಜಿಟಲ್ ಸಹಿ ಕಡ್ಡಾಯವಾಗಿದೆ
ಕರ್ನಾಟಕದಲ್ಲಿ ಯಾವುದೇ ಆಸ್ತಿ ನೋಂದಣಿ ಸಮಯದಲ್ಲಿ ಡಿಜಿಟಲ್ ಸಹಿ ಮತ್ತು ವಿಡಿಯೋ ರೆಕಾರ್ಡಿಂಗ್ ಈಗ ಕಡ್ಡಾಯ ಮಾಡಲಾಗಿದೆ. ಆಸ್ತಿ ನೋಂದಣಿಯ ನಂತರ ಯಾವುದೇ ಸಮಸ್ಯೆ ಆಗಬಾರದು ಮತ್ತು ಮೋಸ ತಡೆಗಟ್ಟುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಡಿಜಿಟಲ್ ಸಹಿ ಜೊತೆಗೆ ಸ್ಟ್ಯಾಂಪ್ ಡ್ಯೂಟಿ ಕೂಡ ಸಂಪೂರ್ಣ ಡಿಜಿಟಲ್ ಮಾಡಲಾಗಿದೆ.
* ತೆರಿಗೆ ಪಾವತಿ ಮಾಡಿದ ರಸೀದಿಗಳು
ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ, ಆಸ್ತಿಗೆ ಆಧಾರ್ ಸಂಖ್ಯೆ ಲಿಂಕ್ ಸೇರಿದಂತೆ ಭೂಪರಿವರ್ತನೆ ಸರ್ಟಿಫಿಕೇಟ್ ಚೆಕ್ ಮಾಡುವುದು ಬಹಳ ಅಗತ್ಯವಾಗಿದೆ.
ಆಸ್ತಿ ಖರೀದಿಸುವ ಸಮಯದಲ್ಲಿ ಮಾಡುವ ಸಾಮಾನ್ಯ ತಪ್ಪುಗಳು
* EC ಪರಿಶೀಲನೆ ಮಾಡದೆ ಇರುವುದು
* ಭೂಪರಿವರ್ತನೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ ಇರುವುದು
* ಮೂಲದಾಖಲೆ ಪರಿಶೀಲನೆ ಮಾಡದೆ ಆಸ್ತಿ ಖರೀದಿ ಮಾಡುವುದು
* ಆಸ್ತಿಗೆ ಕುಟುಂಬ ವಿವಾದ ಇದ್ದರೆ ಅದನ್ನು ತಿಳಿದುಕೊಳ್ಳದೆ ಇರುವುದು
Disclaimer: This information is provided for awareness purposes only. For personalised legal advice, consult a qualified professional and refer to official government notifications.

