Fastag Annual Pass 3000: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣವನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಒಂದು ಐತಿಹಾಸಿಕ ಘೋಷಣೆ ಮಾಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ₹3,000 ಮೌಲ್ಯದ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ನ್ನು ಆಗಸ್ಟ್ 15, 2025 ರಿಂದ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ. ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ಮಾಡಿಸಿಕೊಂಡರೆ ವರ್ಷಪೂರ್ತಿ ಫಾಸ್ಟ್‌ಟ್ಯಾಗ್ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಹಾಗಾದರೆ ಒಂದು ವರ್ಷದ ಫಾಸ್ಟ್‌ಟ್ಯಾಗ್ ಪಾಸ್ ಮಾಡಿಸಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ನ ವಿಶೇಷತೆಗಳು
ಈ ವಾರ್ಷಿಕ ಪಾಸ್ ಖಾಸಗಿ, ವಾಣಿಜ್ಯೇತರ ವಾಹನಗಳಾದ ಕಾರು, ಜೀಪ್, ಮತ್ತು ವ್ಯಾನ್‌ಗಳಿಗೆ ಮಾತ್ರ ಲಭ್ಯವಿರುತ್ತದೆ. ಇದು ಸಕ್ರಿಯಗೊಂಡ ದಿನಾಂಕದಿಂದ ಒಂದು ವರ್ಷ ಅಥವಾ 200 ಪ್ರಯಾಣಗಳವರೆಗೆ, ಯಾವುದು ಮೊದಲು ಮುಗಿಯುತ್ತದೆಯೋ ಅದರವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಯಿಂದ ಟೋಲ್ ಪ್ಲಾಝಾಗಳಲ್ಲಿ ಕಾಯುವ ಸಮಯ ಕಡಿಮೆಯಾಗಲಿದೆ ಮತ್ತು ಪ್ರಯಾಣಿಕರಿಗೆ ಒಂದೇ ಬಾರಿಗೆ ಪಾವತಿಯ ಸೌಲಭ್ಯ ದೊರೆಯಲಿದೆ.
ಈ ಪಾಸ್‌ನಿಂದ ಯಾರಿಗೆ ಲಾಭ?
ನಿತ್ಯವೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಈ ಪಾಸ್ ದೊಡ್ಡ ರಿಯಾಯಿತಿಯಂತೆ. 60 ಕಿ.ಮೀ. ಒಳಗಿನ ಟೋಲ್ ಪ್ಲಾಝಾಗಳಿಂದ ತೊಂದರೆ ಅನುಭವಿಸುವವರಿಗೆ ಇದು ವರದಾನವಾಗಲಿದೆ. ಈ ಯೋಜನೆಯಿಂದ ಟೋಲ್ ಪಾವತಿಗಳ ಜಟಿಲತೆ ಕಡಿಮೆಯಾಗಿ, ಪ್ರಯಾಣ ಸುಗಮವಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ದೂರ ಪ್ರಯಾಣ ಮಾಡುವವರಿಗೆ ಈ ವಾರ್ಷಿಕ ಫಾಸ್ಟ್‌ಟ್ಯಾಗ್ ಸಾಕಷ್ಟು ಸಹಕಾರಿ ಕೂಡ ಆಗಲಿದೆ.
ಫಾಸ್ಟ್‌ಟ್ಯಾಗ್ ಪಾಸ್‌ಗೆ ಹೇಗೆ ಅರ್ಜಿ ಸಲ್ಲಿಸುವುದು?
ಈ ಪಾಸ್‌ನ ಸಕ್ರಿಯಗೊಳಿಕೆ ಮತ್ತು ನವೀಕರಣಕ್ಕಾಗಿ ರಾಜ್‌ಮಾರ್ಗ್ ಯಾತ್ರಾ ಆಪ್ ಮತ್ತು ಎನ್‌ಎಚ್‌ಎಐ (NHAI) ಹಾಗೂ ರಸ್ತೆ ಸಾರಿಗೆ ಸಚಿವಾಲಯದ (MoRTH) ಅಧಿಕೃತ ವೆಬ್‌ಸೈಟ್‌ಗಳಲ್ಲಿ ಒಂದು ವಿಶೇಷ ಲಿಂಕ್ ಶೀಘ್ರದಲ್ಲಿ ಲಭ್ಯವಾಗಲಿದೆ. ಈ ಡಿಜಿಟಲ್ ವೇದಿಕೆಗಳು ಪಾಸ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಿವೆ.
ಭಾರತದ ರಸ್ತೆ ಸಾರಿಗೆಗೆ ಒಂದು ಹೊಸ ದಿಕ್ಕು
ಈ ಯೋಜನೆಯು ಭಾರತದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ಮತ್ತು ಆಧುನೀಕರಿಸುವ ಸರ್ಕಾರದ ಗುರಿಯ ಭಾಗವಾಗಿದೆ. ಟೋಲ್ ಪ್ಲಾಝಾಗಳಲ್ಲಿ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಪ್ರಯಾಣಿಕರಿಗೆ ವೇಗವಾದ ಮತ್ತು ಒತ್ತಡ-ಮುಕ್ತ ಪ್ರಯಾಣದ ಅನುಭವ ನೀಡುವ ಗುರಿಯನ್ನು ಈ ಪಾಸ್ ಹೊಂದಿದೆ.